
ಇದು ತುಂಬಾ ತುಂಬಾ ಹಿಂದಿನ ಕಥೆ. ಆಗ ಈಗಿನ ತರ ಶಾಲೆಗಳು ಇರಲಿಲ್ಲ. ಮಕ್ಕಳು ಶಾಲೆಗಳಿಗೆ ಹೋಗ್ತಾನೇ ಇರಲಿಲ್ಲ. ಗಂಡು ಮಕ್ಕಳೆಲ್ಲಾ ಹೊಲದಲ್ಲಿ ಅಪ್ಪಂದಿರಿಗೆ ಸಹಾಯ ಮಾಡ್ತಿದ್ದರು. ಹೆಣ್ಣು ಮಕ್ಕಳೆಲ್ಲಾ ಮನೇಲಿ ಅಮ್ಮಂದಿರಿಗೆ ಸಹಾಯ ಮಾಡ್ತಾ ಇದ್ದರು. ಆಗಿನ ಜನ ಈಗಿನ ತರಹ ಸಮಯ ನೋಡಿ ಕೆಲಸ ಮಾಡ್ತಾ ಇರಲಿಲ್ಲ. ದಿನಾ ಬೆಳಗಾದಾಗ ಏಳ್ತಾ ಇದ್ದರು, ಕತ್ತಲಾದರೆ ಮಲಗ್ತಾ ಇದ್ದರು. ಹಸಿವಾದಾಗ ಊಟ ಮಾಡ್ತಾ ಇದ್ದರು. ದಿನ, ವಾರ, ತಿಂಗಳು, ವರ್ಷ ಅನ್ನೋದು ಅವರಿಗೆ ಗೊತ್ತೇ ಇರಲಿಲ್ಲ. ಅವರು ವಾಸ ಮಾಡ್ತಿದ್ದ ಮನೆಗಳು ಕೂಡ ಈಗಿನ ಮನೆಗಳಂತೆ ಇಟ್ಟಿಗೆ, ಸಿಮೆಂಟು, ಗಾರೆಯಿಂದ ಕಟ್ಟಿದ ಮನೆಗಳಲ್ಲ. ಆಗಿನ ಜನ ಹುಲ್ಲಿನ ಗುಡಿಸಲುಗಳಲ್ಲಿ ವಾಸಮಾಡ್ತಾ ಇದ್ದರು.
ಇಂತಹ ಸಮಯದಲ್ಲಿ ಒಬ್ಬ ಹುಡುಗ ಇದ್ದ. ಅವನ ಹೆಸರು ದಾರೋ. ದಾರೋಗೆ ಏಳು ವರ್ಷ ವಯಸ್ಸು. ದಾರೋ ತನ್ನ ತಂದೆ, ತಾಯಿ, ಅಣ್ಣ ಮತ್ತು ತಂಗಿ ಜೊತೆ ಒಂದು ಪುಟ್ಟ ಗುಡಿಸ್ಲಲ್ಲಿ ವಾಸಮಾಡ್ತಿದ್ದ. ಆ ಗುಡಿಸಲು ಎಷ್ಟು ಪುಟ್ಟದಾಗಿತ್ತು ಅಂದರೆ ಅದರಲ್ಲಿ ಎಲ್ಲರಿಗೂ ಮಲಗೋಕೆ ಜಾಗನೇ ಇರಲಿಲ್ಲ. ಆದ್ದರಿಂದ ದಾರೋ ರಾತ್ರಿ ಹೊತ್ತು ಅಣ್ಣನ ಜೊತೆ ಗುಡಿಸಲ ಹೊರಗೆ ಮಲಗ್ತಾ ಇದ್ದ. ತಣ್ಣಗಿರೋ ರಾತ್ರೀಲಿ ಆಕಾದಲ್ಲಿರೋ ನಕ್ಷತ್ರಗಳನ್ನ ನೋಡ್ತಾ ಮಲಗೋದು ಬೋಡೋಗೆ ಬಹಳ ಇಷ್ಟ.
ಒಂದು ದಿನ ದಾರೋ ಆಕಾಶಾನ ನೋಡ್ತ ಮಲಕ್ಕೊಂಡ್ ಇದ್ದ. ಆಕಾಶದ ತುಂಬಾ ನಕ್ಷತ್ರಗಳು ಮಿಣಕ್ ಮಿಣಕ್ ಅಂತಾ ಮಿನುಗ್ತಾ ಇದ್ವು. “ಅಬ್ಬಾ ಎಷ್ಟೊಂದು ನಕ್ಷ್ತತ್ರಗಳು” ಅಂತ ಬೋಡೋ ಮಗ್ಗಲು ಬದಲಾಯಿಸಿ ಮತ್ತೆ ಆಕಾಶ ಕಡೆ ಗಮನ ಹರಿಸಿದ. ಗಮನ ಹರಿಸಿದವನೇ ಮಲಗಿದ್ದವನು ದಡಕ್ಕನೇ ಎದ್ದು ಕುಳಿತ.
“ಅರೆ! ಏನಿದು? ನಾನಿಷ್ಟು ದಿನ ಇದನ್ನು ಕಂಡೇ ಇಲ್ಲ.” ” ನಾನೇನಾದರೂ ಕನಸು ಕಾಣ್ತಾ ಇದ್ದೀನಾ” ಅಂತ ಅಂಗೈ ಯಿಂದ ಕಣ್ಣು ಉಜ್ಜಿ ಉಜ್ಜಿ ನೋಡಿದ. ಇಲ್ಲ! ಇದು ಕನಸಲ್ಲ. ಆಕಾಶದಲ್ಲಿ ಮಬ್ಬಾದ ನಕ್ಷತ್ರಗಳ ಮಧ್ಯೆ ಒಂದು ತಟ್ಟೆ! ದುಂಡಗಿನ ಬಿಳೀ ತಟ್ಟೆ! ದಾರೋ ಚಕ್ಕಂತ ಎದ್ದು”ಅಮ್ಮಾ! ಅಪ್ಪಾ ಹೊರಗೆ ಬನ್ನಿ! ಬೇಗ ಹೊರಗೆ ಬನ್ನಿ!” ಎಂದು ಕಿರುಚಿಕೊಂಡು ಗುಡಿಸಿಲಿನ ಕಡೆ ಓಡಿದ. ಗುಡಿಸಲಿನಿಂದ ಎಲ್ಲರೂ ಗಾಬರಿಯಿಂದ ಹೊರಗಡೆ ಓಡಿ ಬಂದರು. ದಾರೋ ಆಕಾಶದತ್ತ ಕೈ ತೋರಿಸಿ, “ಅಪ್ಪಾ, ಅಲ್ಲಿ ನೋಡು ಆಕಾಶದಲ್ಲಿ ಯಾರೋ ಅಲ್ಲಿ ತಟ್ಟೆಯನ್ನು ಇಟ್ಟಿದ್ದಾರೆ!” ಅಪ್ಪ ಮೇಲೆ ನೋಡಿ, ” ಅಯ್ಯೋ ಮಗು ಬೋಡೋ, ಅದೂ ತಟ್ಟೆ ಅಲ್ಲ. ಅದೂ ಪಾತ್ರೆ. ದೇವತೆಗಳ ಪಾತ್ರೆ… ದೇವತೆಗಳ ಅಮೃತ ಪಾತ್ರೆ, ಅದನ್ನು ನೋಡಿ ಹಾಗೇ ಭಯಪಡೋದೆ?” ಎಂದು ಒಳಗೆ ಹೋದರು.
ಓ! ಇದು ದೇವತೆಗಳ ಅಮೃತ ಪಾತ್ರೆನಾ” ಅಂತ ದಾರೋ ಅದನ್ನೇ ನೋಡ್ತಾ ನಿದ್ದೆ ಮಾಡ್ದ.
ಮಾರನೇ ದಿನ ಬೆಳಗ್ಗೇ ಎದ್ದ ಒಡನೇ ದಾರೋ ಅಮೃತ ಪಾತ್ರೆಯನ್ನು ಆಕಾಶದಲ್ಲಿ ಹುಡುಕಿದ. ಅದು ರಾತ್ರಿ ಕಂಡ ಜಾಗದಲ್ಲಿ ಇರಲಿಲ್ಲ. ಅಪ್ಪ ಅವನನ್ನು ಅವಸರ ಅವಸರವಾಗಿ ಹೊಲಕ್ಕೆ ಕರೆದುಕೊಂಡು ಹೋದರೂ ಅವನ ಮನಸ್ಸು ಮಾತ್ರ ಅಮೃತ ಪಾತ್ರೆಯಲ್ಲೇ ಇತ್ತು. ರಾತ್ರಿ ಆಗೋದನ್ನೇ ಕಾಯ್ತಾ ಇದ್ದ. ಯಾವತ್ತಿನ ಹಾಗೆ ಆ ದಿನ ಕೂಡಾ ರಾತ್ರಿ ಆಯಿತು. ಆಕಾಶದಲ್ಲಿ ಅಮೃತಪಾತ್ರೆ ಕಾಣಿಸಿತು. ಆದರೆ ಹಿಂದಿನ ರಾತ್ರಿ ದುಂಡಾದ ತಟ್ಟೆಯಂತೆ ಕಾಣಿಸಿದ ಅಮೃತ ಪಾತ್ರೆ ಈ ದಿನ ಕೊಂಚ ಹರಿದಂತೆ ಕಾಣಿಸಿತು.
ಕೂಡಲೆ ಅಪ್ಪನನ್ನು ಕೂಗಿ ಕರೆದ, “ಅಪ್ಪಾ! ಅಪ್ಪಾ! ನೋಡು ಬಾ ಇಲ್ಲಿ! ಅಮೃತ ಪಾತ್ರೆ ಹರಿದು ಹೋಗಿದೆ”. ಅಪ್ಪ ಹೊರಗೆ ಬಂದು, “ಓ! ಇದು ಹರಿದು ಹೋಗಿಲ್ಲ ಬೋಡೋ ದೇವತೆಗಳು, ಅಮೃತ ಪಾತ್ರೆಯಿಂದ ಅಮೃತಾನ ದಿನಾ ಸ್ವಲ್ಪ ಸ್ವಲ್ಪ ಕುಡೀತಾರೆ”
‘ಏನು ದಿನಾ ದೇವತೆಗಳು ಅಮೃತಾನ ಕುಡೀತಾರ? ಅದು ಹೇಗೆ? ದಿನಾ ನೋಡಬೇಕು.’ ಎಂದು ಕೊಂಡ. ದಿನಾ ರಾತ್ರಿ ಮರೆಯದೆ ಅಮೃತಪಾತ್ರೆಯನ್ನು ಗಮನಿಸುತ್ತಾ ಇದ್ದ. ಅಮೃತಪಾತ್ರೆ ಕ್ರಮೇಣ ಕಡಿಮೆ ಆಗ್ತಾ ಆಗ್ತಾ ಕಡೆಗೆ ಒಂದು ದಿನ ಕಾಣಿಸಲೇ ಇಲ್ಲ. ದಾರೋಗೆ ಅಳುನೇ ಬಂದ್ಬಿಡ್ತು.”ಅಪ್ಪಾ ದೇವತೆಗಳು ಅಮೃತನೆಲ್ಲಾ ಕುಡುದ್ಬಿಟ್ಟಿದ್ದಾರೆ! ಅಮೃತ ಪಾತ್ರೆನೇ ಕಾಣಿಸ್ತಾ ಇಲ್ಲ”ಬೋಡೋನ ತಂದೆ “ಅಳಬೇಡ ದಾರೋ, ದೇವತೆಗಳು ಮತ್ತೆ ಅಮೃತವನ್ನು ಅಮೃತಪಾತ್ರೆಗೆ ತುಂಬುತ್ತಾರೆ.” ಎಂದು ಸಮಾಧಾನ ಮಾಡಿದರು. ಅಪ್ಪ ಹೇಳಿದ ಹಾಗೆ ಮಾರನೇ ದಿನ ಸ್ವಲ್ಪವೇ ತುಂಬಿದ ಅಮೃತಪಾತ್ರೆ ಕಾಣಿಸಿತು. ದಾರೋಗೆ ಖುಷಿಯಾಯಿತು. ನಂತರ ನಿಧಾನವಾಗಿ ಅಮೃತಪಾತ್ರೆ ಸ್ವಲ್ಪ ಸ್ವಲ್ಪನೇ ತುಂಬಿಕೊಳ್ಳುತ್ತಾ ಕಡೆಗೆ ಒಂದು ದಿನ ಪೂರ್ತಿಯಾಗಿ ಮತ್ತೆ ದೊಡ್ಡ ತಟ್ಟೆ ತರಹ ಕಾಣಿಸಿತು.
ದಾರೋಗೆ ಅಮೃತಪಾತ್ರೆ ಖಾಲಿಯಾಗೋದು, ತುಂಬಿಕೊಳ್ಳೋದು ನೋಡೋದು ಒಂದು ಇಷ್ಟದ ಕೆಲಸ ಆಯಿತು.
ಹೀಗೆ ಬಹಳ ವರ್ಷ ಕಳೆದವು. ಈಗ ದಾರೋ ಮೊದಲಿನ ಸಣ್ಣ ಹುಡುಗನಲ್ಲ. ಬೆಳೆದ ಯುವಕ. ಆದರೂ ಈಗಲೂ ಅಮೃತಪಾತ್ರೆಯನ್ನು ಗಮನಿಸುವುದನ್ನು ದಾರೋ ಬಿಟ್ಟಿಲ್ಲ. ಒಂದು ದಿನ ದಾರೋಗೆ ಅಮೃತ ಪಾತ್ರೆ ಎಷ್ಟು ರಾತ್ರಿಗಳಲ್ಲಿ ತುಂಬಿ ಎಷ್ಟು ರಾತ್ರಿಗಳಲ್ಲಿ ಬರಿದಾಗುತ್ತದೆ ನೋಡಬೇಕು ಅಂತ ಅನಿಸಿತು. ಅಮೃತಪಾತ್ರೆ ಪೂರ್ತಿ ತುಂಬಿದ್ದ ದಿನ ತನ್ನ ಗುಡಿಸಲಿನ ಗೋಡೆಯ ಮೇಲೆ ಇದ್ದಿಲಿನಿಂದ ಒಂದು ಗೆರೆಯನ್ನು ಎಳೆದ. ಮಾರನೆಯ ದಿನ ಮತ್ತೊಂದು ಗೆರೆಯನ್ನು ಎಳೆದ. ಆ ಮಾರನೆಯ ದಿನ ಮತ್ತೊಂದು ಗೆರೆಯನ್ನು ಎಳೆದ. ಹೀಗೆ ಪ್ರತಿದಿನ ಅಮೃತಪಾತ್ರೆ ಪೂರ್ತಿ ಬರಿದಾಗಿ ಮತ್ತೆ ತುಂಬುವ ತನಕ ಗೋಡೆಯ ಮೇಲೆ ಗೆರೆಗಳನ್ನು ಎಳೆಯುತ್ತಾ ಹೋದ. ಕಡೆಗೆ ಆ ಎಲ್ಲಾ ಗೆರೆಗಳನ್ನು ಎಣಿಸಿದ. ಎಲ್ಲಾ ಸೇರಿ ಒಟ್ಟು ಮೂವತ್ತು ಗೆರೆಗಳು ಇದ್ದವು. ಹೀಗೆ ಮೂರು ನಾಲ್ಕು ಬಾರಿ ಮಾಡಿದ. ಪ್ರತಿಬಾರಿಯೂ ಇಪ್ಪತ್ತೊಂಬ್ಬತ್ತು ಅಥವಾ ಮೂವತ್ತು ಗೆರೆಗಳು ಆಗುತ್ತಿದ್ದವು. ಅಂದರೆ ಅಮೃತ ಪಾತ್ರೆ ಒಮ್ಮೆ ತುಂಬಿ ಮತ್ತೆ ಖಾಲಿಯಾಗಲು ಇಪ್ಪತ್ತೊಂಬತ್ತು ಅಥವಾ ಮೂವತ್ತು ರಾತ್ರಿಗಳು ಹಿಡಿಯುತ್ತಿದ್ದವು.
ಇದನ್ನು ದಾರೋ ತನ್ನ ಹಳ್ಳ್ಇ ಯ ಎಲ್ಲರೊಂದಿಗೂ ಹಂಚಿಕೊಂಡ. ಎಲ್ಲರೂ ಅವನನ್ನು “ಅಮೃತಪಾತ್ರೆಯ ದಾರೋ” ಎಂದು ಕರೆಯತೊಡಗಿದರು.
ಮಕ್ಕಳೇ ನಿಮಗೆ ದಾರೋನ ಅಮೃತಪಾತ್ರೆ ಯಾವುದು ಅಂತ ಗೊತ್ತಾಯ್ತಾ?
ಏನದು?
ಹೌದು ಚಂದ್ರ!