ಚೈತನ್ಯ ಪೂರ್ಣ, ಕ್ರಿಯಾಶೀಲ ಪರಿಸರದ ಮಹತ್ವ

ಕೋವಿಡ್ – ೧೯ ಎಲ್ಲರ ಮೇಲೂ ಅತ್ಯಂತ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡಿದೆ. ಬಡವ, ಬಲ್ಲಿದ, ಹಿರಿಯ, ಹರೆಯ, ಪುರುಷ, ಮಹಿಳೆ ಹೀಗೆ ಯಾರನ್ನೂ ಬಿಡದೆ ಆಹುತಿ ತೆಗೆದುಕೊಂಡಿದೆ. ಇದರಿಂದ ಪ್ರಾಣಕಳೆದುಕೊಂಡವರು ಹಲವಾರು ಮಂದಿಯಾದರೆ, ಲಾಕ್ ಡೌನ್ ನ ಪರಿಣಾಮದಿಂದ ಕೆಲಸವನ್ನು ಕಳೆದುಕೊಂಡವರು, ಸಂಬಳದಲ್ಲಿ ವ್ಯತ್ಯಯವಾಗಿ ಕಷ್ಟದಲ್ಲಿರುವವರು ಬಹಳಷ್ಟು. ಸರಿಸುಮಾರು ಎಲ್ಲರೂ ಮನೆಯಿಂದಲೇ ಕೆಲಸಮಾಡುವಂತಾಗಿದ್ದು, ಮಕ್ಕಳಿಗೆ ಮನೆಯ ಆವರಣ, ಮಲಗುವ ಕೋಣೆಗಳೇ ಶಾಲಾ ಕಾಲೇಜುಗಳಾಗಿ ಮಾರ್ಪಾಡಾಗಿವೆ.

ದುರಾದೃಷ್ಟವಶಾತ್ ಮಹಿಳೆಯರು ಕೋವಿಡ್ ನಿಂದ ಬಾಧಿತರಾದವರಲ್ಲಿ ಮೊದಲಿಗರು.  ಮನೆ ಕೆಲಸ, ಗಂಡ, ಮಕ್ಕಳು, ಅತ್ತೆ ಮಾವಂದಿರ ಆರೈಕೆ, ಎಲ್ಲರ ಆರೋಗ್ಯದ ಕಳಕಳಿಯ ಜೊತೆ ಕಛೇರಿಯ ಕೆಲಸಗಳನ್ನು ಮನೆಯಿಂದಲೇ ಮಾಡಬೇಕಾದ ಪರಿಸ್ಥಿತಿ ಅವರಿಗೆ ಏರ್ಪಟ್ಟಿದೆ. ಇವೆಲ್ಲವುಗಳ ಮಧ್ಯೆ ಮಕ್ಕಳ ವಿದ್ಯಾಭ್ಯಾಸ ಕೂಡ ಅವರ ಮೇಲೆಯೇ ಬಿದ್ದಂತಹ ಜವಾಬ್ದಾರಿ.

ಇಂತಹ ಪರಿಸ್ಥಿತಿಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ನೀಡಬೇಕಾದ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ತಪ್ಪಿಸಿ, ನೇರವಾಗಿ ಒಂದನೇ ತರಗತಿಗೆ ಸೇರಿಸಿಬಿಡೋಣ ಎಂದು ನಿರ್ದರಿಸುವುದು ಸಹಜ. ಆರ್ಥಿಕವಾಗಿ ಇದೊಂದು ಒಳ್ಳೆಯ ನಿರ್ಧಾರವಾದರೂ ಮಗುವಿನ ಬೆಳವಣಿಗೆಗೆ ಅಷ್ಟು ಸಕಾರಾತ್ಮಕವಾದುದಲ್ಲ. ಮಗುವನ್ನು ಆರ್ಥಿಕ ಸಂಕಷ್ಟದಿಂದ ಶಾಲೆಗೆ ಕಳಿಸಲಾಗದಿದ್ದರೂ ಮನೆಯ ವಾತಾವರಣವನ್ನು ಉತ್ತೇಜನಕಾರಿಯನ್ನಾಗಿ ಮಾಡುವುದು ಬಹಳ ಅವಶ್ಯಕ. ಪ್ರೋತ್ಸಾಸದಾಯಕ, ಕ್ರಿಯಾಶೀಲ ಪರಿಸರ ಮಗುವಿನ ಬೆಳವಣಿಗೆಗೆ, ಕಲಿಕೆಗೆ ಎಷ್ಟು ಮುಖ್ಯ ಎಂಬುದಕ್ಕೆ ಐದು ಕಾರಣಗಳನ್ನು ಕೊಡಬಹುದು.

ಮೊದಲನೆಯ ಮತ್ತು ಅತಿಮುಖ್ಯ ಕಾರಣ ಏನೆಂದರೆ, ಮಗುವಿನ ಜೀವನದಲ್ಲಿ ಪ್ರತೀ ನಿಮಿಷ, ಪ್ರತೀ ಕ್ಷಣ ಬೆಳವಣಿಗೆಯ ಸಮಯ. ಆಗುತ್ತಿರುತ್ತದೆ. ಪ್ರತೀ ಸನ್ನಿವೇಶವೂ ಅಮೂಲ್ಯವಾಗಿರುತ್ತದೆ. ಮಗುವಿನಲ್ಲಿ ಹದಿಹರೆಯದವರಿಗಿಂತಲೂ ಹೆಚ್ಚಿನ ಸಾಮರ್ಥ್ಯ ಇರುತ್ತದೆ.  ಆದರೆ ಈ ಸಾಮರ್ಥ್ಯಗಳು ಮಗುವಿನಲ್ಲಿ ಶಾಶ್ವತವಾಗಿ ಇರುವುದಿಲ್ಲ. ೬ ವರ್ಷ ತುಂಬುವಷ್ಟರಲ್ಲಿ ಮಗು ಈ ಸಾಮರ್ಥಗಳನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಮಗುವಿಗೆ ಈ ಹಂತದಲ್ಲಿಯೇ ತನ್ನಲ್ಲಿರುವ ಸಾಮರ್ಥ್ಯಗಳ ಪೂರ್ತಿ ಲಾಭ ಪಡೆಯೋಕೆ ಪ್ರಚೋದನೆ ಆಗುವಂತಹ ವಾತಾವರಣ ಒದಗಿಸಿ ಕೊಡುವುದು ಅವಶ್ಯಕವಾಗಿದೆ.

ಎರಡನೆಯದಾಗಿ, ಮಗುವಿಗೆ ಭೌತಿಕ ಮತ್ತು ಬೌದ್ಧಿಕ ಅಂದರೆ physical and mental needs ಅಗತ್ಯಗಳೆರಡೂ ಇರುತ್ತವೆ. ಆದರೆ ನಾವು ಸಾಮಾನ್ಯವಾಗಿ ಮಗುವಿನ ಭೌತಿಕ ಅಗತ್ಯಗಳಿಗೆ ಮಾತ್ರ ಗಮನಹರಿಸಿ ಮಾನಸಿಕ ಅಗತ್ಯಗಳನ್ನು ಕಡೆಗಣಿಸಿಬಿಡುತ್ತೇವೆ. ಉದಾ: ಆರೈಕೆ ಮಾಡುವುದು, ಸ್ನಾನ ಮಾಡಿಸುವುದು, ಬಟ್ಟೆ ಹಾಕುವುದು, ತಲೆ ಬಾಚುವುದು, ವಾಕಿಂಗ್ ಗೆ ಕರೆದೊಯ್ಯುವುದು ಇತ್ಯಾದಿ. ತನ್ನ ಕೈಗಳನ್ನು ಬಳಸಿ ವಸ್ತುಗಳನ್ನು ಮುಟ್ಟಿ, ನೋಡಿ, ರುಚಿಸಿ, ಒಡಾಡಿ, ತನ್ನ ಪರಿಸರದಿಂದ ಪ್ರಪಂಚವನ್ನು ಅರಿಯಬೇಕೆನ್ನುವ ಮಗುವಿನ ಮಾನಸಿಕ ಅಗತ್ಯಗಳನ್ನು ಕಡೆಗಣಿಸಿ ಬಿಡುತ್ತೇವೆ. ತಾನು ಕಲಿಯುತ್ತಿರುವ ಭಾಷೆಯನ್ನು ತನ್ನೊಂದಿಗೆ ಪ್ರತಿಕ್ರಿಯಿಸುವ ಮತ್ತು ಸ್ಪಂದಿಸುವ ಜೀವಿಯೊಂದಿಗೆ ಉಪಯೋಗಿಸಲು ಇಚ್ಛಿಸುತ್ತದೆ. ಆದರೆ ಪೋಷಕರು ಮಗುವನ್ನು ಸಂಭಾಳಿಸುವುದಕ್ಕಿಂತ ಮಕ್ಕಳಿಗೆ ಮೋಬೈಲ್ ನೀಡಿಯೋ ಅಥವ ಟಿ.ವಿ. ಹಾಕಿಯೋ ನಿರ್ಜೀವ ವಸ್ತುಗಳೊಂದಿಗೆ ಮಕ್ಕಳನ್ನು ಗಂಟೆಗಟ್ಟಲೆ ಕೂರಿಸಿ ತಮ್ಮ ಮನೆ-ಕಛೇರಿಯಲ್ಲಿ ತಲ್ಲೀನರಾಗಿಬಿಡುತ್ತಾರೆ. ಇದು ನ್ಯಾಷನಲ್ ಸೈಂಟಿಫಿಕ್ ಕೌನ್ಸಿಲ್ ಅನ್ಡ್  ಡೆವಲಪಿಂಗ್ ಚೈಲ್ಡ್ ಸಂಸ್ಥೆ ಹೇಳುವಂತೆ ಒಂದು ರೀತಿಯ ಕಡೆಗಣನೆ – ನೆಗ್ಲೆಕ್ಟ್. ಇದರ ಪರಿಣಾಮ ಮುಂದೆ ಮಗುವಿನ  ಬೆಳವಣಿಗೆಯಲ್ಲಿ ಮಂದಗತಿ ತಂದು ಮತ್ತು ಇಂಟರ್ವೆನ್ ಷನ್ನಿನ ಅಗತ್ಯತೆ ಬರುತ್ತದೆ.

ಮೂರನೆಯದಾಗಿ, ASER – ಆನ್ಯುಯೆಲ್ ಸ್ಟೇಟಸ್ ಆಪ್ ಎಜುಕೇಶನ್ ರಿಪೋರ್ಟ್, ಪ್ರತೀವರ್ಷ ಶೈಕ್ಷಣಿಕ ಮಟ್ಟದ ಅಧ್ಯಯನ ಮಾಡುತ್ತಾ ಬಂದಿದೆ. ಅವರಿಗೆ ಆಶ್ಚರ್ಯವನ್ನುಂಟುಮಾಡಿದ ಸತ್ಯಸಂಗತಿ ಎಂದರೆ, ೫ನೇ ತರಗತಿಯಲ್ಲಿ ವ್ಯಾಸಂಗಮಾಡುತ್ತಿರುವ ಮಕ್ಕಳಿಗೆ ೨ನೇ ತರಗತಿಯ ಪುಸ್ತಕವನ್ನು ಸ್ಪಷ್ಟವಾಗಿ ಓದಲು ಮತ್ತು ಸುಲಭವಾದ ಭಾಗಾಕಾರವನ್ನು ಮಾಡಲು ಬರುತ್ತಿಲ್ಲ ಎಂಬುದು. ಇದಕ್ಕೆ ಕಾರಣವನ್ನು ಪರಿಶೋಧಿಸುತ್ತಾ, ತಮ್ಮ ಸಂಶೋಧನೆಯನ್ನು ಪೂರ್ವ ಪ್ರಾಥಮಿಕ ಶಾಲೆಗಳಿಗೂ ವಿಸ್ತರಿಸಿದರು. ಅವರ ೨೦೧೯ರ ಸಂಶೋಧನೆ, ಭಾರತದ ಪೂರ್ವಪ್ರಾಥಮಿಕ ಶಿಕ್ಷಣ ಕಳಪೆಯಾಗಿರುವುದೆಂದು ವರದಿಮಾಡಿದೆ. ಇದಕ್ಕೆ ಕಾರಣ ಭಾರತದ ಮಕ್ಕಳಿಗೆ ಸರಿಯಾದ ಸಮಯದಲ್ಲಿ ಸರಿಯಾದ ಕ್ರಿಯಾಶೀಲ ಪರಿಸರ ದೊರಕದೇ ಇರುವುದು. ಆದ್ದರಿಂದ ಹುಟ್ಟಿದಂದಿನಿಂದ ೬ ವರ್ಷದೊಳಗಿನ ಮಕ್ಕಳಿಗೆ ಉತ್ತಮ ಕಲಿಕಾ ಪರಿಸರ ನಿರ್ಮಿಸಿಕೊಡುವುದು ಅವಶ್ಯವಾಗಿದೆ.

ನಾಲ್ಕನೆಯದು, ಮರಿಯಾ ಮಾಂತೆಸ್ಸೋರಿಯ ಪ್ರಕಾರ “ಮಗು ಮಾನವನ ನಿರ್ಮಾತೃ”, ಮನುಷ್ಯನ ಭವಿಷ್ಯದ ನಿರ್ಮಾತ. ಉದಾಹರಣೆಗೆ ಜಾದೂಗಾರ ೬ ಚೆಂಡುಗಳನ್ನು ಒಂದೇ ಕಾಲಕ್ಕೆ ಮೇಲಕ್ಕೆಸೆದು ಹಿಡಿಯುತ್ತಾನೆ. ಒಬ್ಬ ಬ್ಯಾಲೆ ನೃತ್ಯಗಾತಿ ಗಾಳಿಯಲ್ಲಿ ತೇಲುವಂತೆ ಕಾಣುತ್ತದೆ. ಇವರಲ್ಲಿನ ಈ ಕೌಶಲ್ಯಗಳು ಅವರು ಸಣ್ಣವರಾಗಿದ್ದಾಗ ಅವರಲ್ಲಿನ ಮಗು ಸಾಧಿಸಿದ ನಡೆ, ಸ್ಥಿಮಿತ, ಸಮತೋಲನ, ಹೊಂದಾಣಿಗಳ ಮೇಲೆ ಬೆಳೆದಿದೆ. ಆ ಸ್ಥಿಮಿತ ಹೊಂದಾಣಿಕೆ, ಸಮತೋಲನಗಳೇ ಮೂಲದಲ್ಲಿ ಇಲ್ಲದಿದ್ದರೆ ಭವಿಷ್ಯದಲ್ಲಿ ಜಾದೂಗಾರ, ಬ್ಯಾಲೆ ನೃತ್ಯಗಾರ, ಎಂಜಿನಿಯರ್, ಸರ್ಜನ್, ಸಂಗೀತಗಾರ ರೂಪ ಹೊಂದುತ್ತಿರಲಿಲ್ಲ. ಇಂದು ನಾವು ಏನಾಗಿದ್ದೇವೆಯೋ ನಾವು ಅನಾಥರಾಗಿದ್ದರೂ ಅದೇ ಆಗಿರುತ್ತಿದೆವು. ಆದರೆ ನಾವು ಸಣ್ಣವರಿದ್ದಾಗ, ನಮ್ಮೊಳಗಿನ ಮಗು ನಾಶವಾಗಿದ್ದರೆ ನಾವು ಈಗಿರುವ ಹಂತವನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ.

ಕಡೆಯದಾಗಿ, ೩ ವರ್ಷಗಳವರೆಗೆ, ಮಗುವಿನ ಅರಿವು ಪ್ರಜ್ಞಾಪೂರ್ವಕವಾಗಿರುವುದಿಲ್ಲ. ಆದ ಕಾರಣ ಮಗುವಿಗೆ ನೇರವಾಗಿ ಏನನ್ನೂ ಹೇಳಿಕೊಡಲು ಸಾಧ್ಯವಿಲ್ಲ. ಮಗು ತನ್ನ ಕೈ ಮತ್ತು ಇಂದ್ರಿಯಗಳ ಸಹಾಯದಿಂದ ಪರಿಸರದ ಮೂಲಕ ಜಗತ್ತನ್ನು ಅರಿತುಕೊಳ್ಳುತ್ತಾನೆ. ಆದುದರಿಂದ ನಾವು ಮಗುವಿಗೆ ಏನನ್ನೇ ಹೇಳಿಕೊಡ ಬೇಕಾದರೂ ಅದನ್ನು ಮಗುವಿನ ಕೈ ಮತ್ತು ಇಂದ್ರಿಯಗಳು ಕ್ರಿಯಾಶೀಲವಾಗಿರುವಂತೆ,  ಪರಿಸರವನ್ನು ನಿರ್ಮಿಸಬೇಕು.

ಆದ್ದರಿಂದ ಮಗುವನ್ನು ಶಾಲೆಗೆ ಸೇರಿಸದಿದ್ದರೂ ಮಗುವಿನ ಬೌದ್ಧಿಕ ಮತ್ತು ಭೌತಿಕ ಅಗತ್ಯತೆಗಳನ್ನು ಪೂರೈಸಲು, ಸತತವಾಗಿ ಕ್ರಿಯಾಶೀಲನಾಗಿರಲು ಅವಶ್ಯಕವಾದ ಮನೆಯ ಪರಿಸರವನ್ನು ಒದಗಿಸುವುದು ಅತ್ಯಗತ್ಯವಾಗಿದೆ. ಈ ಪರಿಸರವು ಚೈತನ್ಯ ಪೂರ್ಣವಾಗಿದ್ದು ಮಗುವನ್ನು ಉತ್ತೇಜಿಸುವಂತಿದ್ದರೆ, ಮಗು ತನ್ನನ್ನು ತಾನು ಕ್ರಿಯಾ ಶೀಲ ವಿದ್ಯಾರ್ಥಿಯಾಗಿ ರೂಪಿಸಿಕೊಳ್ಳಲು ಹಾಗೂ ಭವಿಷ್ಯದಲ್ಲಿ ಪ್ರಭಾವೀ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಹಾಯವಾಗುತ್ತದೆ.

Written by 

I’m Dr. S. Rekha Reddy — Montessorian, educator, and storyteller with over three decades of experience in early childhood education. Founder of Vidyanjali Academy for Learning (est. 1992), I’ve been deeply involved in teaching children and training teachers in the Montessori method. I’ve led multiple diploma batches in collaboration with the Indian Institute for Montessori Studies and conducted several workshops, certificate courses, and seminars for educators and parents. My doctoral research focused on Play in Early Childhood Education, comparing Montessori and non-Montessori approaches. I’ve authored early learning books like Nanna Kannada Pustaka (1 & 2), My First Book, and Meri Pehli Kitab, and translated Dr. Maria Montessori’s What You Should Know About Your Child into Kannada. I also host three Kannada podcasts: Mareyalaagada Mahabharata – Mahabharata stories for all ages Maguvininda Manava – reflections on childhood and humanity Nimma Maguvina Bagge Nimagenu Tilidirabeku – parenting insights in simple Kannada I believe a beautiful childhood creates a beautiful world — and I’m here to journey with those who shape it.